Thursday 24 May, 2007

ಕಾಳಿಂಗಸರ್ಪಗಳ ರಾಜಧಾನಿ... ಆಗುಂಬೆ

ಎಂಥ ಚೆಂದ ನಮ್ಮ ಆಗುಂಬೆ. ಆ ಆಗುಂಬೆಗೆ ಅದೆಷ್ಟೋ ಗರಿಗಳು. ಪ್ರಕೃತಿ, ಸೂರ್ಯಾಸ್ತಮಾನ, ಮಳೆಯ ರಾಜಧಾನಿ ಹೀಗೆ. ಈ ಚೆಂದಕ್ಕೆ ಮತ್ತೊಂದು ಗರಿ ಅದು. ಈಗ ಕಾಳಿಂಗಸರ್ಪಗಳ ರಾಜಧಾನಿಯೂ ಹೌದು ಎಂಬುದು ದೃಢಪಟ್ಟಿದೆಯಂತೆ.ಕಾಳಿಂಗ ಸರ್ಪ ಅಲಿಯಾಸ್ ಕಿಂಗ್‌ಕೋಬ್ರಾ ಜಗತ್ತಿನ ವಿಷದ ಹಾವುಗಳಲ್ಲಿಯೇ ಅತ್ಯಂತ ದೊಡ್ಡದಾದ ಹಾವು. ಇದನ್ನು ದೃಡ ಪಡಿಸಿರುವವರು ವಿಶ್ವದ ಖ್ಯಾತ ಉರಗ ತಜ್ಞ ವಿಟೇಕರ್.೧೯೭೧ರಲ್ಲಿ ಆಗುಂಬೆಗೆ ಭೇಟಿ ನೀಡಿದ್ದ ವಿಟೇಕರ್‌ಗೆ ಮೊದಲು ಇಲ್ಲಿನ ಮನೆಯೊಂದರಲ್ಲಿ ೯ ಅಡಿ ಉದ್ದದ ಕಾಳಿಂಗ ದರ್ಶನವಾಯಿತು. ಇದಾದ ಕೆಲವೇ ದಿನಗಳಲ್ಲಿ ಇನ್ನೊಂದು ಕಾಳಿಂಗ ಹಾವು ಕಾಣಿಸಿಕೊಂಡಿತು. ಮತ್ತು ಕಾಳಿಂಗನ ಬಗ್ಗೆ ಇಲ್ಲಿನ ಜನರು, ಅಂಗಡಿ ಕಟ್ಟೆಗಳಲ್ಲಿ ಮಾತನಾಡಲು ಪ್ರಾರಂಭಿಸಿದಾಗ ಅವರಿಗೆ ಕುತೂಹಲ ಹೆಚ್ಚಿತು. ನಂತರ ಕಾಳಿಂಗನಬಗ್ಗೆ ರಿಸರ್ಚ್ ಮಾಡಲು ನಿರ್ಧರಿಸಿಯೇ ಬಿಟ್ಟರಂತೆ. ಹೀಗೆ ವಿವರಿಸಿದ್ದು ಅವರ ಶಿಷ್ಯ ಗೌರಿಶಂಕರ್.ಈ ಕಾಳಿಂಗ ರಾಜಧಾನಿಯಲ್ಲಿಗ ‘ರಾಜರ’ ರಿಸರ್ಚ್ ನಡೆಯುತ್ತಿದೆ. ಅವರ ಹಾವ- ಭಾವ, ಸಂತಾನ... ಹೀಗೆ ದಾಖಲಾತಿ ಆಂದೋಲನ.ಈ ಆಂದೋಲನದ ಪ್ರಥಮ ಮಾಹಿತಿ ಪ್ರಕಾರ ಆಂಗುಬೆ ಕಾಳಿಂಗನ ರಾಜಧಾನಿ ಎಂಬುದು ಬಹುತೇಕ ಖಚಿತವಾಗುವಂತೆ ಅಂಶಗಳು ಕಂಡುಬಂದಿವೆ.ಆಗುಂಬೆಯಲ್ಲಿ ವಿಟೇಕರ್ ನೇತೃತ್ವದಲ್ಲಿ ಪ್ರಾರಂಭವಾಗಿರುವ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ ಈಗ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು ಇನ್ನೊಂದು ವರ್ಷದಲ್ಲಿ ಕಾಳಿಂಗ ಸರ್ಪದ ಸಾಕಷಷ್ಟು ಮಾಹಿತಿ ಸಿದ್ದವಾಗುತ್ತದೆ.ಇದರ ಬಗ್ಗೆ ರಿಸರ್ಚ್ ನಡೆಸಿ ಪ್ರಪಂಚಕ್ಕೆ ಮಾಹಿತಿ ನೀಡಲು ವಿಟೇಕರ್ ನೇತೃತ್ವದ ತಂಡ ಶ್ರಮಿಸುತ್ತಿದೆ.ಕಳೆದ ೨೨ ತಿಂಗಳಿಂದ ಮಳೆಕಾಡು ಸಂಶೋಧನಾ ಕೇಂದ್ರ ಈ ಕುರಿತು ತನ್ನ ಚಟುವಟಿಕೆ ಪ್ರಾರಂಭಿಸಿದ್ದು, ಪ್ರಸ್ತುತ ಪಶ್ಚಿಮ ಘಟ್ಟದಲ್ಲಿ ಕಾಳಿಂಗನ ನಡೆದಾಟದ ಬಗ್ಗೆ ಅಬ್ಸರ್‌ವೇಶನ್ ಕಾರ್‍ಯ ನಡೆದಿದೆ.‘ನಾವೀಗ ರೇಡಿಯೋ ಟೆಲಿಮೀಟರ್ ಮತ್ತು ಮೆಡಿಕಲ್ ಕ್ಯುಟೆರಿ ತಂತ್ರಜ್ಞಾನದ ಮೂಲಕ ಪರಿಶೀಲನಾ ಕಾರ್‍ಯ ನಡೆಸಲು ಸಿದ್ದತೆ ನಡೆಸುತ್ತಿದ್ದೇವೆ. ಇದನ್ನು ಬಳಸಲು ಅರಣ್ಯ ಇಲಾಖೆಯಿಂದ ಪರ್‍ಮಿಶನ್ ಬೇಕು. ನಂತರ ಕಾಳಿಂಗ ಸರ್ಪದ ಮೇಲೆ ಪ್ರಯೋಗ ಪ್ರಾರಂಭವಾಗುತ್ತದೆ’ ಎನ್ನುತ್ತಾರೆ ಸಂಶೋಧನಾ ಕೇಂದ್ರದ ಮುಖ್ಯ ಅಧಿಕಾರಿ ಪಿ. ಗೌರಿಶಂಕರ್.ಗೌರಿಶಂಕರ್ ಹೇಳುವಂತೆ, ಅವರು ಇಲ್ಲಿಗೆ ಬಂದ ನಂತರ ಸಮೀಪದ ಮನೆ, ಕೊಟ್ಟಿಗೆ, ಬಾವಿಯಲ್ಲಿ ಕಂಡುಬಂದ೫೦ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹಿಡಿದಿದ್ದಾರೆ. ಅದೂ ಸುತ್ತಮುತ್ತಲ ಹಳ್ಳಿಗಳ ಮನೆಗಳಲ್ಲಿ ಸೇರಿಕೊಂಡಿರುವ ಕಾಳಿಂಗನನ್ನು ಹಿಡಿಯಲಾಗಿದೆ. ಹಾಗೆ ಅದನ್ನು ಅಲ್ಲೇ ಸಮೀಪದ ಕಾಡಿನಲ್ಲಿ ಬಿಡಲಾಗಿದೆ.ಈ ವರೆಗೆ ಕಾಡಿನಲ್ಲಿ ಸಿಕ್ಕ ಕಾಳಿಂಗನ ಮೊಟ್ಟೆಗಳನ್ನು ಸಂಗ್ರಹಿಸಲಾಗಿತ್ತು. ನಂತರ ೧೮ ತಿಂಗಳಲ್ಲಿ ಸುಮಾರು ೧೧೯ ಮರಿಗಳನ್ನು ಪುನಃ ಕಾಡಿಗೆ ಬಿಡಲಾಗಿದೆ.
ಕಾಳಿಂಗನ ಬಗ್ಗೆ...ದೊಡ್ಡದಾದ ಶರೀರ, ನುಣುಪಾದ ಹೊಳೆಯುವ ಹುರುಪೆಗಳು; ಪ್ರಧಾನವಾಗಿ ಶರೀರದ ಮುಂಭಾಗದಲ್ಲಿ ವಿಶಿಷ್ಟವಾದ ಬಿಳಿಯ ಅಡ್ಡ ಪಟ್ಟೆಗಳು, ದೊಡ್ಡದಾದ ಕಲೆ, ಹುರುಪೆಗಳ ತುದಿಯಲ್ಲಿ ಕಪ್ಪು ಬಣ್ಣವಿರುತ್ತದೆ.ಹುಟ್ಟಿದಾಗ ೫೦ ಸೆಂಟಿಮೀಟರ್ ಇದ್ದು, ಸರಾಸರಿ ಮೂರು ಮೀಟರ್ ಇರುತ್ತದೆ. ಇನ್ನು ಗರಿಷ್ಠ ೫ ಮೀಟರ್ ಇರುತ್ತದೆ.ಬೃಹತ್ ಗಾತ್ರದ ಕಾಳಿಂಗ ಸರ್ಪದ ದೊಡ್ಡ ತಲೆಯು ಗುತ್ತಿಗೆಗಿಂತ ಸ್ವಲ್ಪ ಅಗಲವಾಗಿರುತ್ತದೆ. ತಲೆಯ ಹುರುಪೆಗಳ ತುದಿಯಲ್ಲಿ ಕಪ್ಪು ಬಣ್ಣ ಇರುತ್ತದೆ.ಹಳದಿಯಿಂದ ದಟ್ಟವಾದ ಆಲಿವ್ ಹಸಿರಿನವರೆಗೆ ಶರೀರದ ಒಟ್ಟು ಬಣ್ಣದಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಬಾಲವು ಕೆಲವೊಮ್ಮೆ ಕಡು ಕಪ್ಪು ಬಣ್ಣ ಇರುತ್ತದೆ.ಶರೀರದ ತಳ ಭಾಗದ ಬಣ್ಣವು ಮೇಲ್ಘಾಗದ ಬಣ್ಣದಂತೆಯೇ ಇದ್ದು, ಸ್ವಲ್ಪ ತಿಳಿಯಾಗಿರುತ್ತದೆ.ಇದು ಪ್ರಧಾನವಾಗಿ ಹಾವುಗಳನ್ನು ಮತ್ತು ಕೆಲವೊಮ್ಮೆ ಹಲ್ಲಿಗಳನ್ನು ತಿನ್ನುತ್ತವೆ. ಕೇರೆ ಹಾವು ಮತ್ತು ಚೌಕಳಿ ಬೆನ್ನೇಣು ಹಾವುಗಳಂತಹ ದೊಡ್ಡ ಹಾವುಗಳೇ ಇದರ ಪ್ರಮುಖ ಆಹಾರವಾಗಿರುವುದಂತೆ ಕಾಣುತ್ತದೆ. ಗರಿಷ್ಟ ವಯೋಮಾನ ೩೦ ವರ್ಷ.ಇದರ ವಿಷ ನಾಗರ ಹಾವಿನ ವಿಷಕ್ಕಿಂತ ಕಡಿಮೆ ಪರಿಣಾಮ ಉಂಟುಮಾಡುವಂಥದ್ದು. ಆದರೆ ವಿಷ ಆನೆಯನ್ನೂ ಸಾಹಿಸಬಲ್ಲದು.ಥೈಲ್ಯಾಂಡಿನಲ್ಲಿ ಮಾತ್ರ ಈ ಹಾವಿನ ಕಡಿತದ ಚಿಕಿತ್ಸೆಗೆ ಬೇಕಾದ ಪ್ರತಿ ವಿಷ ದೊರೆಯುತ್ತದೆ.ಭಾರತದಲ್ಲಿ ಇವು ಅಪರೂಪವಾದರೂ ಬಹುತೇಕ ಪಶ್ಚಿಘಟ್ಟದಲ್ಲೇ ಹೆಚ್ಚಾಗಿ ಇದೆ. ಅಸ್ಸಾಂನ ಕಾಫಿ ಟೀ ತೋಟಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.ಆವಾಸ ಸ್ಥಾನ ಹೆಚ್ಚಾಗಿ ಮಳೆ ಬೀಳುವ ಪ್ರದೇಶ, ಮತ್ತು ದಟ್ಟ ಸಸ್ಯ ರಾಶಿ ಇರುವೆಡೆ.ಹೆಣ್ಣು ಕಾಳಿಂಗ ಎಲೆಗಳಿಂದ ಗೂಡನ್ನು ನಿರ್ಮಿಸುತ್ತದೆ. ಗೂಡು ನಿರ್ಮಿಸಿಕೊಳ್ಳುವ ಜಗತ್ತಿನ ಏಕೈಕ ಹಾವುಕೂಡ ಇದಾಗಿದೆ.ಇನ್ನೊಂದು ಮಹತ್ವದ ಅಂಶ ಎಂದರೆ ಕಾಳಿಂಗ ಆಕ್ರಮಣದ ಸ್ವಭಾವ ಎಂದೆಲ್ಲಾ ಕೇಳಿದ್ದೇವೆ. ಆದರೆ ಅದು ಹೆಚ್ಚಿನ ಮಟ್ಟಗೆ ಕಲ್ಪನೆಯೇ. ದಾಖಲೆಗಳು ಹೇಳುವ ಪ್ರಕಾರ ಇವು ಸಾಧು ಸ್ವಭಾವದ ಸರ್ಪಗಳು. ಆಕ್ರಮಣ ಮಾಡಲು ಇಷ್ಟಪಡವು ಮತ್ತು ಸಾಧ್ಯವಾದಾಗಲೆಲ್ಲಾ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ.ನಿಸರ್ಗದ ನಡುವೆ ನೋಡಲು ಕಾಳಿಂಗ ಸರ್ಪ ನಿಜವಾಗಿಯೂ ಭಯಾನಕವಾಗಿವೆ. ಅದನ್ನು ಗಾಯಗೊಳಿಸಿದಾಗ ಅಥವಾ ನಿರ್ಬಂಧಿಸಿದಾಗ ಮಾತ್ರ ಅದು ಬಾಯ್ತೆರೆದು ಜೋರಾಗಿ ಬುಸುಗುಟ್ಟುತ್ತಾ ಆಕ್ರಮಣದ ಮಾಡಿದ ವ್ಯಕ್ತಿಯ ಮೇಲೆರಗಬಹುದು.ಇತರೆ ಹಾವುಗಳಿಗೆ ಅಪರೂಪದವಾದ ಪ್ರಜ್ಞೆ ಹಾಗೂ ಬುದ್ಧಿವಂತಿಕೆಯಿಂದ ಕಾಳಿಂಗ ಸರ್ಪಗಳು ವರ್ತಿಸುತ್ತವೆ.

No comments: