Tuesday 15 May, 2007

ನೋಡ ಬನ್ನಿ ಕುಂದಾದ್ರಿ...

... ಬನ್ನಿ
ಮೋಡದ ಜೊತೆ ಗುದ್ದಾಡಬೇಕೇ? ದೂರದಲ್ಲೆಲ್ಲೋ ಕಾಣುವ ಆಕಾಶವೆಂಬುದನ್ನು ಮುಟ್ಟಬೇಕೆ? ವಿಶಾಲ ಪಶ್ಚಿಮ ಘಟ್ಟವನ್ನು ಒಂದು ಕೇಂದ್ರ ಬಿಂದುವಾಗಿಟ್ಟುಕೊಂಡು ಸುತ್ತಲೂ ನೋಡಬೇಕೆ? ಇನ್ನು ಕರ್ನಾಟಕಕ್ಕೇ ಕರೆಂಟುಕೊಡುವುದಕ್ಕಾಗಿ ಸಾವಿರಾರು ಎಕರೆ ಮುಳುಗಡೆ ಮಾಡಿದಂತೆ ವಾರಾಹಿ ಹಿನ್ನೀರಿನ ಕರಾಳ ದೃಶ್ಯ ನೋಡಬೇಕೆ? ಹಾಗಿದ್ದರೆ ಬನ್ನಿ... ನಿಮ್ಮನ್ನು ಕೈ ಬೀಸಿ ಕರೆಯತ್ತಿದೆ ಕುಂದಾದ್ರಿ ಬೆಟ್ಟ.
ದೂರದಲ್ಲೋ ಕಾಣುವ ಮೋಡ ಈ ಕುಂದಾದ್ರಿಯ ಮೇಲೆ ನಿಂತರೆ ನಿಮ್ಮ ಮಧ್ಯೆ, ನಿಮ್ಮನ್ನು ಸೀಳಿಕೊಂಡೇ ಹೋಗುತ್ತದೆ. ಅದೊಂದು ಹೊಸ ಅನುಭವ ಕೊಡುವ ಸ್ಥಳ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿರುವ ಈ ಕುಂದಾದ್ರಿ ಬೆಟ್ಟ ಚಾರಣಿಗರ ಸ್ವರ್ಗ, ಪ್ರಕೃತಿ ಪ್ರಿಯರ ನೆಚ್ಚಿನ ತಾಣ.
ಸಮುದ್ರಮಟ್ಟದಿಂದ ಸುಮಾರು ೪೫೦೦ ಸಾವಿರ ಅಡಿ ಎತ್ತರದಲ್ಲಿರುವ ಇಲ್ಲಿಂದ ಪ್ರಕೃತಿಯನ್ನು ವೀಕ್ಷಿಸುವುದೇ ಹಬ್ಬ.
ಇತಿಹಾಸ ಹೇಳುತ್ತದೆ...
ಈ ಬೆಟ್ಟದ ಮೇಲೆ ಜೈನ ಬಸದಿ ಇದೆ. ಅಲ್ಲಿ ಶ್ರೀ ಪಾರ್ಶ್ವನಾಥರ ಮೂರ್ತಿ ಇದೆ. ಹಾಗೆಯೇ ಜೈನ ಪಂಥದಲ್ಲಿ ಪ್ರಮುಖರೆನಿಸಿಕೊಂಡ, ಸಾಧಕರಾದ ಕುಂದ ಕುಂದಾಚಾರ್ಯರ ಮುಕ್ತಿ ಸ್ಥಳ ಇಲ್ಲಿದೆ.
ವಿಶೇಷತೆ...
ಇಲ್ಲೇ ಸಣ್ಣ ಪುಷ್ಕರಣಿ ಇದ್ದು, ಅಲ್ಲಿ ವರ್ಷದ ೩೬೫ ದಿನವೂ ನೀರು ಇರುವುದು ವಿಶೇಷ. ಇನ್ನೊಂದು ಪುಟ್ಟದಾದ ತಾವರೆಕೆರೆ. ಅಲ್ಲಿ ತಾವರೆ ಹೂವು ಅರಳಿ ನಿಂತಿರುವುದು ಆಶ್ಚರ್ಯ ತರುತ್ತದೆ.
ಸೂರ್ಯೋದಯ ಮತ್ತು ಸೂರ್ಯಾಸ್ತ ಇಲ್ಲಿನ ಮತ್ತೊಂದು ವಿಶೇಷ.
ಸೂರ್ಯೋದಯದ ಮೊದಲ ಕಿರಣ ಶ್ರೀ ಪಾರ್ಶನಾಥರ ವಿಗ್ರಹದ ಪಾದದ ಮೇಲೆ ಬೀಳಲು ಪ್ರಾರಂಭವಾಗುತ್ತದೆ. ಹಾಗೆಯೇ ಸೂರ್ಯಾಸ್ತ ಕೂಡ ವಿಶೇಷ ಆನಂದಕೊಡುತ್ತದೆ.
ಮೋಡ, ಮಂಜು ಅಷ್ಟಾಗಿ ಇಲ್ಲದ ಸಮಯದಲ್ಲಿ ಕಿಲೋಮೀಟರ್ ಗಟ್ಟಲೇ ದೂರದ ಕರಾವಳಿಯ ಸಮುದ್ರ ಕಡಲಲ್ಲಿ ದೊಡ್ಡ ದೊಡ್ಡ ಹಡಗುಗಳು ಹಾದು ಹೋಗುವುದು ಪುಟ್ಟದಾಗಿ ಕಾಣುತ್ತದೆ.
ಪ್ರತಿ ವರ್ಷ ಜನವರಿಯಲ್ಲಿ ಇಲ್ಲಿ ಜಾತ್ರೆ ನಡೆಯಲಿದ್ದು, ಉತ್ತರ ಭಾರತದಿಂದ ಸಾವಿರಾರು ಜನರು ಇಲ್ಲಿಗೆ ಬಂದು ಪದ್ಮಾವತಿ, ಪಾರ್ಶ್ವನಾಥ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
ಮೊಲ, ಕಾಡೆಮ್ಮೆ ಸಾಕಷ್ಟು ಕಂಡುಬಂದರೆ, ಹುಲಿ ಮುಂತಾದ ಕ್ರೂರ ಪ್ರಾಣಿ ಈ ಭಾಗದಲ್ಲಿ ಇದೆಯಂತೆ.
ಇಲ್ಲಿಗೇ ಸಮೀಪವೇ ಆಗುಂಬೆ, ಜೋಗಿಗುಂಡಿ ಜಲಪಾತವಿದೆ. ೨೯ ಕಿಲೋಮೀಟರ್ ತೆರಳಿದರೆ ಶೃಂಗೇರಿ.
ಮಾರ್ಗಸೂಚಿ: ಶಿವಮೊಗ್ಗ- ಉಡುಪಿ ರಸ್ತೆಯಲ್ಲಿ ತೀರ್ಥಹಳ್ಳಿಯಿಂದ ಆಗುಂಬೆ ಕಡೆಗೆ ಹೋಗುವ ರಸ್ತೆಯಲ್ಲಿ ಕುಂದಾದ್ರಿ ಬರುತ್ತದೆ. ಮುಖ್ಯ ರಸ್ತೆಯಿಂದ ನಾಲ್ಕು ಕಿಲೋಮೀಟರ್ ಒಳ ರಸ್ತೆಯ ಮೂಲಕ ಸಾಗಿದರೆ ನಂತರ ನಂತರ ೪ ಕಿಲೋಮೀಟರ್ ಗುಡ್ಡವೇರಬೇಕು.
ಇಲ್ಲವಾದರೆ ಖಾಸಗಿ ವಾಹನದಲ್ಲಿ ಗುಡ್ಡದ ಮೇಲೆ ತೆರಳಬಹುದು. ಉತ್ತಮ ರಸ್ತೆ ಇದೆ. (ಕಂಡೀಷನ್‌ನಲ್ಲಿರುವ ವಾಹನ ಮಾತ್ರ ಗುಡ್ಡ ಹತ್ತಲು ಸಾಧ್ಯ).

No comments: